   ಮೂಲದೊಡನೆ ಪರಿಶೀಲಿಸಿ

ಕೊರೆಯಚ್ಚು ಮುದ್ರಣ

ಬರೆದಿರುವ ವಿಷಯವನ್ನಾಗಲೀ ಚಿತ್ರಗಳನ್ನಾಗಲೀ ಸುಲಭವಾಗಿ ಪ್ರತಿ ತೆಗೆಯುವ ವಿಧಾನ (ಸ್ಟೆನ್ಸಿಲ್ ಪ್ರಿಂಟಿಂಗ್). ಇಲ್ಲಿ ಎರಡು ವಿಧದ ಮುದ್ರಣ ಫಲಕಗಳು ಇವೆ: 1.ಲೇಖನ, ಕಚೇರಿಯ ರಶೀತಿ, ನಮೂನೆ ಮುಂತಾದವುಗಳ ಪ್ರತಿಗಳನ್ನು ತೆಗೆಯಲು ಬಳಸುವ ಮಯಣಲೇಪಿತ ಅಚ್ಚಿನ ಹಾಳೆ. 2.ಭಾಂಗಿಗಳ ಮೇಲೆ ಗೋಡೆಗಳ ಮೇಲೆ ಇತ್ಯಾದಿ ಚಿತ್ರಗಳನ್ನೋ ವಿಳಾಸಗಳನ್ನೋ ಬರೆಯಲು ಬಳಸುವ ಲೋಹದ ತಗಡಚ್ಚುಗಳು.

ಕರ್ನಾಟಕ

 
            ಕರ್ಣಾಟಕ
            ಮೇಲಿನದು ಲೋಹದ ತಗಡಚ್ಚು :
                         ಕೆಳಗಿನದು ಮುದ್ರಣಾಕ್ಷರಗಳು

ಮಯಣಲೇಪಿತ ಹಾಳೆಗೆ ಸ್ಟೆನ್ಸಿಲ್ ಹಾಳೆ ಎಂದು ಹೆಸರು. ಇದರ ಮೇಲೆ ಬೆರಳಚ್ಚು ಯಂತ್ರದ ನೆರವಿನಿಂದ ಅಥವಾ ಸ್ಟೈಲಸ್ ಎಂಬ ಹೆಸರಿನ ವಿಶಿಷ್ಟ ಲೇಖನಿಯ ಸಹಾಯದಿಂದ ಬರೆವಣಿಗೆ ಮಾಡುತ್ತಾರೆ. ಆಗ ಅಕ್ಷರಗಳಿರುವಲ್ಲಿ ರಂಧ್ರಗಳುಂಟಾಗುತ್ತವೆ. ಇಂಥ ಹಾಳೆಯ ಅಡಿಯಲ್ಲಿ ಖಾಲಿ ಕಾಗದವನ್ನಿಟ್ಟು (ಇಲ್ಲಿ ವಿಶಿಷ್ಟ ಗುಣದ ಹಾಳೆಗಳನ್ನು ಬಳಸುವುದು ವಾಡಿಕೆ) ಸ್ಟೆನ್ಸಿಲ್ ಶಾಯಿಯನ್ನು ಉಪಯೋಗಿಸಿ ಮೂಲಬರೆವಣಿಗೆಯ ಪ್ರತಿಯನ್ನು ಪಡೆಯಬಹುದು. ಈ ಕ್ರಿಯೆಯನ್ನು ಸ್ಟೆನ್ಸಿಲ್ ಯಂತ್ರದ ಸಹಾಯದಿಂದ ಯಾಂತ್ರಿಕವಾಗಿ ನಡೆಸಿ ಕ್ಷಿಪ್ರವಾಗಿ ಬೇಕಾದಷ್ಟು ಪ್ರತಿಗಳನ್ನು ಪಡೆಯುವ ಸೌಕರ್ಯವುಂಟು.

ಲೋಹದ ತಗಡಚ್ಚುಗಳ ಕ್ರಿಯಾವಿಧಾನ ಬೇರೆ. ತೆಳುವಾದ ತಗಡಿನ ಮೇಲೆ ಅಕ್ಷರಗಳನ್ನೋ ಚಿತ್ರಗಳನ್ನೋ ದೊಡ್ಡದಾಗಿ ಕೊರೆದಿರುತ್ತಾರೆ. ಉದಾಹರಣೆ ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಸಮಗಾತ್ರಗಳಲ್ಲಿ ಕೊರೆದಿರುವ ಬಿಡಿ ತಗಡುಗಳಿವೆ.  ಒಂದು ರೈಲ್ವೇ ಭಾಂಗಿಯ ಮೇಲೆ `ಕರ್ಣಾಟಕ ಎಂದು ಬರೆಯಬೇಕೆಂಬುದು ನಮ್ಮ ಉದ್ದೇಶವಾದರೆ ಆಯಾ ಅಕ್ಷರಗಳ ತಗಡಚ್ಚುಗಳನ್ನು ಅನುಕ್ರಮವಾಗಿ ಆಯ್ದು ಒಂದೊಂದರ ಪಡಿಯಚ್ಚನ್ನು ಭಾಂಗಿಯ ಮೇಲೆ ಪಡೆದು ಇಡೀ ಶಬ್ದವನ್ನು ಮುಗಿಸಬೇಕಾಗುತ್ತದೆ. ಇಲ್ಲೆಲ್ಲ ಸುಧಾರಣೆಗಳಿಗೆ ಮತ್ತು ಯಾಂತ್ರೀಕರಣಗಳಿಗೆ ಅವಕಾಶ ಉಂಟು.

ಕೊರೆಯಚ್ಚುಯಂತ್ರ ಇಂದು ಎಲ್ಲ ಸಂಸ್ಥೆಗಳಲ್ಲಿಯೂ ಅವಶ್ಯವಾಗಿರತಕ್ಕ ಸಾಧನಗಳಲ್ಲಿ ಒಂದು. ಒಂದು ಕಾಗದ, ಸುತ್ತೋಲೆ, ಜಾಹಿರಾತು ಇವುಗಳ ಅನೇಕ ಪ್ರತಿಗಳನ್ನು ಅತಿ ಬೇಗನೆ ಸುಲಭವಾಗಿ ಈ ಸಾಧನದಿಂದ ತಯಾರಿಸಬಹುದು. ಈಗ ಉಪಯೋಗದಲ್ಲಿರುವ ಕೊರೆಯಚ್ಚು ಯಂತ್ರದ ಉಪಜ್ಞೆಕಾರ 

ಎ. ಬಿ. ಡಿಕ್(1884). ಅವನು ಅದನ್ನು ಮಿಮಿಯೋಗ್ರಾಫ್ ಎಂಬ ಹೆಸರಿನಿಂದ ಕರೆದ. ಇದು ಸಮತಲ ತಟ್ಟೆಯ ಮಾದರಿಯಲ್ಲಿದೆ. ಆದರೆ ಈಗ ಬಹಳವಾಗಿ ಉಪಯೋಗದಲ್ಲಿರುವ ಮಾದರಿ ದುಂಡಾಕೃತಿಯ ಉರುಳೆ (ರೋಟರಿ) ಮಾದರಿಯಲ್ಲಿದೆ. ಇದರಲ್ಲಿ ಒಂದು ಕೊರೆಯಚ್ಚು ಹೊದಿಕೆಯ ಉರುಳೆಯೂ ಮತ್ತು ಒಂದು ಒತ್ತುವ ಉರುಳೆಯೂ ಇವೆ. ಈ ಮೊದಲನೆಯ ಉರುಳೆಯ ಮೇಲೆ ಒಂದು ಮಸಿಲೇಪಕ ಮೆತ್ತೆಯನ್ನು ಹೊಂದಿಸಿರುತ್ತಾರೆ. ಇದರ ಮೇಲೆ ಕೊರೆಯಚ್ಚು ಮಾಡಿದ ಹಾಳೆಯನ್ನು ಬಿಗಿಯಾಗಿ ಕೂಡಿಸುತ್ತಾರೆ. ಅನಂತರ ಕಾಗದದ ಹಾಳೆಗಳನ್ನು ಇದರಲ್ಲಿ ಜೋಡಿಸಿ, ಉರುಳೆಯನ್ನು ಕೈಯಿಂದಾಗಲಿ ವಿದ್ಯುಚ್ಛಕ್ತಿಯಿಂದಾಗಲಿ ತಿರುಗಿಸಿದಾಗ, ಕಾಗದದ ಹಾಳೆ ಬಿಗಿಯಾಗಿ ಹಿಡಿಯಲ್ಪಟ್ಟು ಒತ್ತುವ ಉರುಳೆಯ ಒತ್ತಡದಿಂದ ಕೊರೆಯಚ್ಚಿನ ಕೆಳಗಡೆ ಇರುವ ಮಸಿಮೆತ್ತೆಯಿಂದ ಬೇಕಾದಷ್ಟು ಮಾತ್ರ ಮಸಿ ಕೊರೆಯಚ್ಚಿನ ರಂಧ್ರಗಳ ಮೂಲಕ ಕಾಗದದ ಮೇಲೆ ಮೂಡಿಬರುತ್ತದೆ.
(ಡಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ